Friday 18 May 2018

ಗುರುವಿಗಾಗಿ ಹುಡುಕಾಟ

ಗುರುವಿಗಾಗಿ ಹುಡುಕಾಟ ನಡೆಸುತ್ತಿದ್ದ ಶಿಷ್ಯನೊಬ್ಬನಿಗೆ ಕೊನೆಗೂ ಗುರುಮನೆ ಕಾಣಿಸುತ್ತದೆ. ಅಲ್ಲಿದ್ದಾರೆ ಗುರುಗಳು, ಹೋಗಿ ಮಾತಾಡಿಸು ಎಂದು ಊರ ಮಂದಿ ಹೇಳುತ್ತಾರೆ. ಆತ ಧಾವಿಸಿ ಹೋಗಿ ಗುರುಗಳ ಮನೆಯ ಬಾಗಿಲು ಬಡಿಯುತ್ತಾನೆ. ಬಾಗಿಲ ತೆರೆದುಕೊಳ್ಳುತ್ತಿದ್ದಂತೆ ಒಳಗೆ ಕೂತಿದ್ದ ಗುರು ಕಾಣಿಸುತ್ತಾನೆ.
'ಯಾರು ಬೇಕಾಗಿತ್ತು' ಎಂದು ಕೇಳುತ್ತಾನೆ ಗುರು.
'ಗುರುಗಳ ಹುಡುಕಾಟದಲ್ಲಿದ್ದೇನೆ.'
'ನಾನು ಗುರುಗಳ ಹುಡುಕಾಟದಲ್ಲಿದ್ದೇನೆ'
'ನೀವೇ ಗುರು'
'ನಾನಲ್ಲ'


'ನೀವೇ ಎಂದು ಗೊತ್ತು. ನಿಮ್ಮನ್ನು ಹುಡುಕಿಕೊಂಡು ಬಂದೆ. ಈಗ ಸಿಕ್ಕಿದ್ದೀರಿ'
'ನನ್ನನ್ನು ನಾನು ಐವತ್ತು ವರ್ಷಗಳಿಂದ ಹುಡುಕುತ್ತಿದ್ದೇನೆ. ನನಗೆ ನಾನು ಸಿಕ್ಕಿಲ್ಲ. ನಿನಗೆ ಸಿಕ್ಕಿದ್ದುವಸಂತೋಷ. ಆದರೆ ನೀನು ಹುಡುಕುತ್ತಿರುವ ನಾನು ನಾನಲ್ಲ'.

ಸಂಗ್ರಹ ಹುಸ್ಸೇನ್..

Friday 4 May 2018

ಸೂಫಿ ಪ್ರೇಮ ಕಾವ್ಯ

ಸೂಫಿ ಪಂಥದ ಗುರಿ : (ಚಿಂತನ ಮಂಥನ)

 ಸೂಫಿ ಪಂಥದ ಮುಖ್ಯ ಗುರಿ ಕತ್ತಲು ಮನಸ್ಸುಗಳನ್ನು ಬೆಳಗಿಸುವುದು. ಮನಸ್ಸಿನಿಂದ ಅನಾರೋಗ್ಯಕರ ಅಹಂ ತೊಳೆದು ಪ್ರೀತಿಯನ್ನು ತುಂಬುವುದು. ಆಂತರಿಕ ಶುದ್ಧೀಕರಣ ಮಾಡುವುದು. ಮನುಷ್ಯನ ಅಸ್ತಿತ್ವ ಏನು ಎಂಬುದರ ಬಗ್ಗೆ ಅರಿವು ಮೂಡಿಸುವುದು. ಜ್ಞಾನೋದಯ ಮಾಡಿ ಸಮಾಜಕಲ್ಯಾಣದಲ್ಲಿ ತೊಡಗಿಸುವುದು. ಅಲೌಕಿಕ ಜ್ಞಾನದ ಬಗ್ಗೆ ಹೆಚ್ಚಿನ ಗಮನ ಹರಿಸುವುದು.

ಪ್ರಪಂಚದ ಎಲ್ಲಾ ಧರ್ಮಗಳಲ್ಲೂ ಆಧ್ಯಾತ್ಮಿಕ ಜ್ಞಾನದ ಅನುಭವಗಳುಂಟು. ಸೂಫಿ ಪಂಥದಲ್ಲಿ ಸದ್ಗುಣಗಳನ್ನು ಬೆಳೆಸುವುದು ಮುಖ್ಯವಾದದ್ದು. ಪ್ರಾಪಂಚಿಕ ಸಂತೋಷಗಳು ಎಂದಿಗೂ ಸೂಫಿಯನ್ನು ತನ್ನ ಗುಲಾಮನನ್ನಾಗಿ ಮಾಡಲಾರವು. ಸೂಫಿಯ ಮನಸ್ಸು ಸದಾ ದೇವನ ಪ್ರೀತಿಯಿಂದ ತುಂಬಿರುತ್ತದೆ. ಅಲ್ಲಿ ದ್ವೇಷ ನೆಲೆ ಮಾಡಲು ಸಾಧ್ಯವೇ ಇಲ್ಲ. ಸೂಫಿಯ ಬಾಯಿಯಿಂದ ಏನು ಬರುತ್ತದೆಯೋ ಮನದಾಳದಲ್ಲೂ ಅದೇ ಇರುತ್ತದೆ. ಸೂಫಿ ತಾನು ನಿಜವಾಗಿ ಹೇಗಿರುತ್ತಾನೋ ಹಾಗೆಯೇ ಪ್ರದರ್ಶಿಸಿಕೊಳ್ಳುತ್ತಾನೆ ಎಂದು ಹ. ಇಮಾಮ್ ಅಬುಬಕರ್ ಖಾನ್ ಅಬು ಇಸಾಕ್ ಹೇಳುತ್ತಾರೆ.

“ಸೂಫಿಯ ಮಾತುಗಳಲ್ಲಿ ಸತ್ಯ ತುಂಬಿ ತುಳುಕುತ್ತಿರುತ್ತದೆ. ಆತನ ಮೌನ ಮತ್ತು ಚಲನವಲನಗಳಲ್ಲಿ ಪ್ರಾಪಂಚಿಕ ಸಂತೋಷವಿರುವುದಿಲ್ಲ” ಎಂದು ಹಝರತ್ ಧುಮ್ನಾನ್ ಮಿಸ್ರಿರವರು ಹೇಳುತ್ತಾರೆ.

“ಸೂಫಿ ಪಂಥ ಒಂದು ಪ್ರತ್ಯೇಕ ಗುಣದ ಹೆಸರು. ತನ್ನನ್ನು ತಾನು ಗೆಲ್ಲುವ ಗುಣ ಮತ್ತು ಆಸೆಗಳಿಂದ ಮುಕ್ತರಾಗುವ ಸಾಮಥ್ರ್ಯ. ಸೂಫಿ ಪಂಥ ಆಂತರಿಕ ಜೀವನದ ಬಗ್ಗೆ ಹೇಳುತ್ತದೆ ಮತ್ತು ಹೃದಯ ಇದರ ಪ್ರೀತಿಯ ಸಂಕೇತ. ಸೂಫಿ ಆತ್ಮವನ್ನು ತಾತ್ಕಾಲಿಕ ಅಥವಾ ಕ್ಷಣಿಕ ಎಂದು ಪರಿಗಣಿಸುವುದಿಲ್ಲ. ಇದು ವಿಶ್ವದ ಪ್ರತಿಯೊಂದು ಕಣವನ್ನು ಆವರಿಸಿದೆ” ಎಂದು ಹ. ಇಮಾಮ್ ಅಬುಲ್ ಹಸನ್ ಹೇಳುತ್ತಾರೆ.

ಸೂಫಿ ಸೃಷ್ಟಿಕರ್ತನನ್ನು ಎಲ್ಲೆಲ್ಲೂ ಕಾಣುತ್ತಾನೆ. ನಾವು ಏನು ನೋಡುತ್ತೆವೋ, ಅನುಭವಿಸುತ್ತೇವೋ ಮತ್ತು ರುಚಿಸುತ್ತೇವೋ ಎಲ್ಲವೂ ತಾತ್ಕಾಲಿಕ. ದೇವನೇ ಸರ್ವೋಚ್ಚ, ಆತನ ಎಲ್ಲೆಗೆ ಮೀರಿದ್ದು ಯಾವುದೂ ಇಲ್ಲ. ಸೂಫಿಪಥದಲ್ಲಿ ನಡೆಯಬೇಕಾದರೆ ಸಹನೆ ಮತ್ತು ಸೃಷ್ಟಿಕರ್ತನನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯ ಇರಬೇಕು. ಆಗ ಮಾತ್ರ ಮದ ಮಾತ್ಸರ್ಯವನ್ನು ಸೋಲಿಸಲು ಸಾಧ್ಯ. ಸೂಫಿ ತನ್ನ ಪ್ರಶಂಸೆ ಮಾಡಿಕೊಳ್ಳುವುದಿಲ್ಲ. ಹೆಚ್ಚಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಅವರ ಹತ್ತಿರ ಏನು ದಾನ ಬರುತ್ತದೋ ಅದನ್ನು ಹಂಚಿಬಿಡುತ್ತಾರೆ. ಸಾಮಾನ್ಯವಾಗಿ ಅವರು ದಾನವನ್ನು ಅನಾಥರಲ್ಲಿ, ಬಡಬಗ್ಗರಲ್ಲಿ ಮತ್ತು ತನ್ನ ಸನ್ನಿಧಿಗೆ ಬಂದವರಲ್ಲಿ ಹಂಚುತ್ತಾರೆ. ಆಂತರಿಕ ಬೆಳಕು ಮತ್ತು ಅಲೌಕಿಕ ಶಕ್ತಿಯನ್ನು ಜನರ ಮನಸ್ಸಿಗೆ ಚೆಲ್ಲುವುದೇ ಅವರ ಕೆಲಸ.

ಒಬ್ಬ ರಾಜನಿಗೆ ಸುಂದರವಾದ ಎರಡು ಕತ್ತರಿಗಳು ಯಾರೋ ಉಡುಗೊರೆಯಾಗಿ ನೀಡಿದರು. ಅದರ ಮೇಲೆ ವಜ್ರದ ಕೆತ್ತನೆ ಕೆಲಸ ಸಹ ಮಾಡಲಾಗಿತ್ತು. ರಾಜ ಅದನ್ನು ಕಾಣಿಕೆಯಾಗಿ ಸೂಫಿ ಫರೀದ್‍ರವರಿಗೆ(ರ) ಕೊಟ್ಟನು. ಕತ್ತರಿಗಳನ್ನು ಸೂಫಿಯವರು ತಿರುಗಿ ಮುರುಗಿ ನೋಡಿ, ಪುನ: ರಾಜನಿಗೆ ಹಿಂತಿರುಗಿಸಿ ಹೇಳಿದರು- “ನನಗೆ ಉಡುಗೊರೆ ಕೊಡಬೇಕೆಂಬ ನಿನಗೆ ಆಸೆ ಇದ್ದರೆ ಒಂದು ಸೂಜಿಯನ್ನು ತಂದು ಕೊಡು.” ರಾಜ ಚಕಿತನಾಗಿ ಕೇಳಿದನು – “ಸೂಜಿಯೇ?” ಆಗ ಸೂಫಿ ಫರೀದ್(ರ) ವಿವರಿಸಿದರು. – “ಕತ್ತರಿಯ ಕೆಲಸ ಒಂದು ವಸ್ತುವನ್ನು ತುಂಡು ತುಂಡಾಗಿ ಮಾಡುವುದು. ಸೂಜಿಯ ಕೆಲಸ ಹೊಲಿಯುವುದು. ನನ್ನದು ಸೂಜಿಯ ಕೆಲಸ, ಕತ್ತರಿ ಕೆಲಸವಲ್ಲ.”

ಸೂಫಿ ಸಂತರು ಯಾರ ಮನಸ್ಸನ್ನು ಒಡೆಯುತ್ತಿರಲಿಲ್ಲ, ನೋಯಿಸುತ್ತಿರಲಿಲ್ಲ. ಜನರ ಮನಸ್ಸಲ್ಲಿ ಪ್ರೀತಿಯ ಚಿಲುಮೆಯನ್ನು ಬೆಳಗುತ್ತಿದ್ದರು. ಹಾಗಾದರೆ ಈ ಕಾಲದಲ್ಲಿ ನಿಜವಾದ ಸೂಫಿ ಸಂತರು ಇಲ್ಲವೇ? ಇದ್ದಾರೆ. ಎರಡು ಕೋಟಿಗೂ ಒಬ್ಬರು ಸಿಗುವುದು ಕಷ್ಟ.